ಚೀನೀ ಕುಂಭಕಲೆ

	ಇಂದು ವಿಶ್ವಾದ್ಯಂತ ಪಿಂಗಾಣಿ ವಸ್ತುಗಳನ್ನು ತಯಾರಿಸಿ ಬಳಸುತ್ತಿರುವರಾದರೂ ಚೀನದ ಪಿಂಗಾಣಿ ತಯಾರಿಕೆಗೆ 1100 ವರ್ಷಗಳ ಇತಿಹಾಸವಿದೆ. 9ನೆಯ ಶತಮಾನದಲ್ಲೇ ತುಂಬ ಕಲಾತ್ಮಕವಾದ ಪಿಂಗಾಣಿ ವಸ್ತುಗಳನ್ನು ಚೀನೀಯರು ತಯಾರಿಸುತ್ತಿದ್ದರು. ಈಗಲೂ ಪಿಂಗಾಣಿ ಪಾತ್ರೆಗಳನ್ನು ಚೀನೀ ಪಾತ್ರೆಗಳು ಎಂದೇ ಕರೆಯುತ್ತಾರೆ. ಇಂಗ್ಲೆಂಡಿಗೆ 17ನೆ ಶತಮಾನದಿಂದಲೇ ಚೀನದಿಂದ ಪಿಂಗಾಣಿ ವಸ್ತುಗಳು ಆಮದಾಗುತ್ತಿದ್ದುವು.

	ಗುಣಮಟ್ಟದ ದೃಷ್ಟಿಯಿಂದ ನೂರಾರು ವಿಧದ ಪಿಂಗಾಣಿ ವಸ್ತುಗಳಿವೆ. ಅವುಗಳ ತಯಾರಿಕೆ ಕ್ರಮವೂ ಬೇರೆ ಬೇರೆ. ಇಂದು ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಬಳಸುತ್ತಿರುವ ಗೃಹೋಪಯೋಗಿ ಮತ್ತು ಭೋಜನ ಕಾಲೋಪಯೋಗಿ ಪಿಂಗಾಣಿ ಪಾತ್ರೆಗಳ ತಯಾರಿಕೆ ಕ್ರಮವನ್ನು ಮಾತ್ರ ಪರಿಶೀಲಿಸಿದೆ.

	ಹೊಳಪುಳ್ಳ ಅಪಾರದರ್ಶಕ ಪಿಂಗಾಣಿ ಪಾತ್ರೆಗಳೇ ಹೆಚ್ಚು ಬಳಕೆಯಲ್ಲಿವೆ. ಪಾರದರ್ಶಕ ಪಿಂಗಾಣಿ ಬಳಕೆ ಅತಿ ವಿರಳ. ಅತ್ಯಂತ ಉತ್ತಮ ವರ್ಗದ ಪಿಂಗಾಣಿ ಪಾತ್ರೆಗಳನ್ನು 12500ಅ 13000ಅ ಉಷ್ಣತೆಯಲ್ಲಿ ತಯಾರಿಸುತ್ತಾರೆ. ಇವು ಮೊದಲ ವರ್ಗದವು. ಇದಕ್ಕಿಂತ 11000ಅ -12000 ಅ ಉಷ್ಣತೆಯಲ್ಲಿ ತಯಾರಾಗುವವು ಎರಡನೆಯ ವರ್ಗದವು.

	ಬಹುಪಾಲು ದೇಶಗಳಲ್ಲಿ ತಮ್ಮವೇ ಆದ ಪಿಂಗಾಣಿ ಕಾರ್ಖಾನೆಗಳಿವೆಯಾದರು ಚೀನೀ ಪಿಂಗಾಣಿಗಳು ಇಂದೂ ಅಲ್ಲಿಗೆ ಆಮದಾಗುತ್ತವೆ. ಪ್ರಾಚ್ಯ ವಸ್ತುಗಳ ಬಗ್ಗೆ ಅಭಿಲಾಷೆಯಿರುವ ಶ್ರೀಮಂತರು ಏಷ್ಯದ, ಅದರಲ್ಲೂ ಚೀನದ ಪಿಂಗಾಣಿಗಳನ್ನೇ ತರಿಸಿಟ್ಟುಕೊಳ್ಳುತ್ತಾರೆ. ಶ್ರೀಮಂತ ಭೋಜನ ಕೂಟಗಳಲ್ಲಿ ಭಾಗವಹಿಸುವವರು ಇಂಥ ಪಿಂಗಾಣಿಗಳನ್ನು ಮೆಚ್ಚಿ ಹೊಗಳುವುದೂ ಉಂಟು. ಅಮೆರಿಕ ಭಾರತ ಮುಂತಾದ ದೇಶಗಳಲ್ಲಿ ಉತ್ತಮ ವರ್ಗದ ಪಿಂಗಾಣಿಗಳನ್ನು ಮೇಲೆ ಹೇಳಿರುವಂತೆ ಹೆಚ್ಚು ಉಷ್ಣತೆಯಲ್ಲೂ ಎರಡನೆಯ ವರ್ಗದವನ್ನು ಕಡಿಮೆ ಉಷ್ಣತೆಯಲ್ಲೂ ತಯಾರಿಸುತ್ತಾರೆ. ಚೀನೀಯರಾದರೋ ಜಾಡಿಯನ್ನು ಅತಿ ಕಡಿಮೆ ಉಷ್ಣತೆಯಲ್ಲೂ (ಒಮ್ಮೊಮ್ಮೆ ಬೇಯಿಸುವುದೇ ಇಲ್ಲ) ಮೆರುಗು ನೀಡುವಾಗ ಅತ್ಯಂತ ಹೆಚ್ಚಿನ ಉಷ್ಣತೆಯಲ್ಲೂ ಅಂದರೆ 13500 ಅ-14800 ಅ ಉಷ್ಣತೆಯಲ್ಲಿ ಬೇಯಿಸುತ್ತಾರೆ. ಹೀಗೆ ಬೇಯಿಸುವಾಗಲೇ ಹಸಿ ಜೇಡಿಯ ಮೈಕಟ್ಟು, ಮೆರುಗು ಕವಚ ಎರಡೂ ಹದಗೊಂಡು ಪಕ್ವವಾಗುತ್ತವೆ. ಚೆನ್ನಾಗಿ ಪಕ್ವವಾದ ಪಿಂಗಾಣಿ ಪಾತ್ರೆಗಳನ್ನು ಬಡಿದಾಗ ಘಂಟಾನಾದದ ಧ್ವನಿ ಅನುರಣಿಸಬೇಕು.

	ಪಿಂಗಾಣಿ ತಟ್ಟೆ, ಪಾತ್ರೆ, ಕುಂಭಗಳ ತಯಾರಿಕೆಗೆ ಪ್ರಧಾನ ಕಚ್ಚಾ ವಸ್ತುವೆಂದರೆ ಚೀನೀ ಜೇಡು. (ನೋಡಿ- ಚೀನೀ-ಮಣ್ಣು) ಈ ಜೇಡಿಯನ್ನು ಕುಂಭತಜ್ಞರು ವಿಶ್ಲೇಷಿಸಿ ಅದರಲ್ಲಿರಬಹುದಾದ ಕಲ್ಮಷಗಳನ್ನು ಬೇರ್ಪಡಿಸುತ್ತಾರೆ. ಜೇಡಿಯಲ್ಲಿ ಎರಡು ಬಗೆ. ಒಂದು ಮೂಲಜೇಡಿ. ಇದು ಎಲ್ಲಿ ರೂಪಗೊಂಡಿರುತ್ತದೋ ಅಲ್ಲಿಯೇ ನೆಲೆಯಾಗಿರುತ್ತದೆ. ಮತ್ತೊಂದು ಜನಿತ ಅಥವಾ ಅಪ್ರಮುಖ ಜೇಡಿ. ಇದು ಮೂಲ ಶಿಲಾ ಸ್ಥಾವರಗಳು, ಕೊರೆತ ಮತ್ತಿತರ ಪ್ರಾಕೃತಿಕ ಕ್ರಿಯೆಗಳಿಂದ ಮೂಲಸ್ಥಾನದಿಂದ ಬಹುದೂರ ಹೋಗಿ ನೆಲಗೊಂಡಿರುತ್ತದೆ. ಹಿಗ್ಗುವ ಗುಣವುಳ್ಳ ಈ ಅಪ್ರಮುಖ ಜೇಡಿಯನ್ನೇ ಪಿಂಗಾಣಿ ತಯಾರಿಕೆಯಲ್ಲಿ ತುಂಬ ಹೆಚ್ಚಾಗಿ ಮೂಲವಸ್ತುವಾಗಿ ಬಳಸುತ್ತಾರೆ. ಭೂಮಿಯಲ್ಲಿ ದೊರೆಯುವ ಜೇಡಿಯಿಂದ ಯಾವ ಮಿಶ್ರಣವನ್ನೂ ಮಾಡದೆ ಒರಟು ಮಡಿಕೆಗಳನ್ನು ತಯಾರಿಸುತ್ತಾರೆ. ಉತ್ತಮ ವರ್ಗದ ಪಿಂಗಾಣಿ ಪಾತ್ರೆಗಳನ್ನು ತಯಾರಿಸುವಾಗ ಮೂಲ ಜೇಡಿಗೆ ಸೆರಾಮಿಕ್ ಕಚ್ಚಾ ವಸ್ತುಗಳನ್ನು ಸೇರಿಸಿ ಪಿಂಗಾಣಿಯ ಗುಣಮಟ್ಟವನ್ನು ಕಾಪಾಡಬೇಕಾಗುತ್ತದೆ. ಸೆರಾಮಿಕ್ ಮಿಶ್ರಣದಿಂದ ತಯಾರಾದ ಈ ಜೇಡಿಯನ್ನು ಚೀನೀ ಜೇಡಿ ಅಥವಾ ಮೂಲ ಜೇಡಿ ಅಥವಾ ಪಿಂಗಾಣಿ ವರ್ಗವೆಂದು ಕರೆಯುತ್ತಾರೆ. ಶುದ್ಧ ಜೇಡಿ ಅಥವಾ ಕೆಯೊಲಿನ್‍ನಲ್ಲಿ 40% ರಿಂದ 50% ಚೀನೀ ಜೇಡ ಇರುತ್ತದೆ. ಈ ಜೇಡಿಯಿಂದ ಪಾರದರ್ಶಕ ಹಾಗೂ ಅಪಾರದರ್ಶಕ ಬಿಳಿಯ ಪಿಂಗಾಣಿ ಪಾತ್ರೆಗಳನ್ನು ತಯಾರಿಸುತ್ತಾರೆ. ಸುದ್ದೆ ಜೇಡಿಯಲ್ಲಿ ಒಮ್ಮೊಮ್ಮೆ ಮಡ್ಡಿ ಸೇರಿಕೊಂಡಿರುತ್ತದೆ. ಇದನ್ನು ಮೂಲ ಜೇಡಿಯೆಂದು ವರ್ಗೀಕರಿಸುತ್ತಾರೆ. ಸುದ್ದೆ ಜೇಡಿಯನ್ನು ಅತ್ಯಧಿಕ ಉಷ್ಣತೆಯಲ್ಲಿ ಬೇಯಿಸಿದರೂ ವಿರೂಪಗೊಳ್ಳುವದಿಲ್ಲ. ಈ ಗುಣದಿಂದಲೇ ಇದನ್ನು ಚೀನೀ ಪಾತ್ರೆಗಳ ಮೈಕಟ್ಟು ತಯಾರಿಸಲು ಬಳಸುವುದು. ಬೆಂದು ಪಕ್ವವಾದಾಗ ಈ ಸುದ್ದೆ ಜೇಡಿ ತನ್ನ ಬಿಳುಪನ್ನು ಪಾತ್ರೆಗಳಿಗೆ ನೀಡುವುದರಿಂದ ಇದನ್ನು ಬಿಳಿ ಜೇಡಿ ಎಂದೂ ಕರೆಯುತ್ತಾರೆ.

	ತುಂಬ ಹಿಂದೆಯೇ ಸುದ್ದೆ ಜೇಡಿಯನ್ನು ಚೀನೀಯರು ಕಂಡುಕೊಂಡರು. ಆದ್ದರಿಂದಲೇ ಅವರು 9ನೆಯ ಶತಮಾನದಿಂದಲೇ ಬಿಳೀ ಪಿಂಗಾಣಿ ಪಾತ್ರೆಗಳನ್ನು ತಯಾರಿಸಲು ಸಾಧ್ಯವಾಯಿತು. ಪ್ರಪಂಚದ ವಿವಿಧ ಭಾಗಗಳಲ್ಲಿ ಸುದ್ದೆ ಜೇಡಿಯನ್ನು ಪತ್ತೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸುದ್ದೆ ಜೇಡಿನ ತೆರದ ಗಣಿಗಳು ಹಾಸನ ಜಿಲ್ಲೆಯ ಬಾಗೇಶಪುರ, ಶಿವಮೊಗ್ಗ ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ, ತೀರ್ಥಹಳ್ಳಿ ಮತ್ತು ಮಂಡ್ಯ ಹಾಗೂ ಮೇಲುಕೋಟೆ ಪ್ರದೇಶದಲ್ಲಿವೆ. ಪಶ್ಚಿಮಬಂಗಾಳದಲ್ಲೂ ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್‍ಗಳ ಹಲವು ಪ್ರದೇಶಗಳಲ್ಲೂ ಬಿಳಿ ಜೇಡಿಯ ಗಣಿಗಳಿವೆ. ಸುದ್ದೆಯನ್ನು ಕಂಡುಹಿಡಿದ ಮೇಲೆ ಯೂರೋಪಿಯನ್ನರೂ ಅತ್ಯುತ್ತಮ ವರ್ಗದ ಚೀನೀ ಪಾತ್ರೆಗಳನ್ನು ತಯಾರಿಸಲು ಆರಂಭಿಸಿದರು. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಕೆರೊಲೀನ, ಜಾರ್ಜಿಯ ಮತ್ತು ಫ್ಲಾರಿಡ ಪ್ರದೇಶಗಳಲ್ಲಿ ಬಿಳಿ ಜೇಡಿ ಹೇರಳವಾಗಿ ದೊರೆಯುತ್ತದೆ. 

	ಮುದ್ದೆಜೇಡಿ 10% ರಿಂದ 15% ರಷ್ಟು ಚೀನೀ ಜೇಡಿಯ ಅಂಶವನ್ನು ಹೊಂದಿರುತ್ತದೆ. ಪಾತ್ರೆಗಳ ಮೈಕಟ್ಟನ್ನು ರಚಿಸಲು ಜಲಜ ಜೇಡು ಮತ್ತು ಕುಲುಮೆ ಜೇಡುಗಳನ್ನು ಸೇರಿಸಿದಾಗ ಮೂಲಜೇಡಿಗೆ ಹೆಚ್ಚಿನ ಜಿಗುಟು ಬರುತ್ತದೆ. ಮೂಲ ಜೇಡಿಯ ವಿವಿಧ ಮಿಶ್ರಣಗಳನ್ನು ಒಂದುಗೂಡಿಸಿ ಗಾಜಿನಂಥ ಹೊಳಪು ತರಲೂ ಪಿಂಗಾಣಿ ಪಾತ್ರೆಗಳಿಗೆ ಗಡಸು ತಂದುಕೊಡಲೂ ಇದು ಅಗತ್ಯ. ಹೀಗೆ ಮಿಶ್ರಣಗೊಂಡ ಮುದ್ದೆ ಜೇಡಿಯನ್ನು ಕೆನೆಹದಕ್ಕೆ ಬರುವವರೆಗೂ ಕಾಯಿಸುತ್ತಾರೆ. ಯಾವುದೇ ಮಿಶ್ರಣವನ್ನು 15%ಕ್ಕಿಂತ ಹೆಚ್ಚು ಸೇರಿಸಬಾರದು. ಕಾಯಿಸುವಾಗ ಜೇಡಿನಲ್ಲಿರುವ ಬಿಳುಪು ಮೆರುಗು ಕೊಟ್ಟಾಗ ನಾಶವಾಗದಂತೆ ಅಥವಾ ಮುಸುಕಾಗದಂತೆ ಎಚ್ಚರ ವಹಿಸಬೇಕು. ಈ ಮುದ್ದೆಜೇಡಿ ಸುದ್ದೆ ಜೇಡಿಗಿಂತ ಹೇರಳವಾಗಿ ದೊರೆಯುತ್ತದೆ. ಇಂಗ್ಲೆಂಡಿನ ಡಿವನ್‍ಷೈರ್, ಡಾರ್‍ಸಿಟ್ ಪ್ರದೇಶಗಳಲ್ಲೂ ಅಮೆರಿಕೆಯ ಕೆಂಟಕಿ, ಟೆನಿಸಿ ಪ್ರದೇಶಗಳಲ್ಲೂ ಹೇರಳವಾಗಿ ದೊರೆಯುತ್ತದೆ. ಈ ಅಮೆರಿಕೆಯ ಕೆಂಟಕಿ, ಟೆನಿಸಿ ಪ್ರದೇಶಗಳಲ್ಲೂ ಹೇರಳವಾಗಿ ದೊರೆಯುತ್ತದೆ. ಈ ಜೇಡಿಯನ್ನು ಗಣಿಗಳಿಂದ ಹೊರತೆಗೆದು ಹಲವು ಪೌಂಡುಗಳ ಮುದ್ದೆಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದುದರಿಂದ ಇದಕ್ಕೆ ಮುದ್ದೆ ಜೇಡೆಂದೇ ಹೆಸರಾಯಿತು.
ಶುದ್ಧ ಸಿಕತ ಅಥವಾ ಫ್ಲಿಂಟು ಮರಳುಧಾತುವಿನಿಂದ ಕೂಡಿ ಸಣ್ಣ ಸಣ್ಣ ಉಂಡೆಗಳ ರೂಪದಲ್ಲಿ ದೊರೆಯುತ್ತದೆ. ಇದಕ್ಕೆ ಒಳಗೆ ಉಕ್ಕಿನ ಬೂದು ಬಣ್ಣವೂ ಹೊರಗೆ ಬಣ್ಣವು ಇರುತ್ತದೆ. ಅಮೆರಿಕದಲ್ಲಿ ವ್ಯಾಪಾರವಾಗುವ ಚೀನೀ ಜೇಡಿಯ ಪ್ರಮುಖ ಮಿಶ್ರಣ ಇದೆ. ಇಂಗ್ಲೆಂಡಿನಲ್ಲಿ ಬಳಸುವ ಮೂಳೆ ಜೇಡಿಗೆ ಇದನ್ನು ಬೆರೆಸುವುದಿಲ್ಲ. ಆದರೂ ಇದು ಪಿಂಗಾಣಿ ತಯಾರಿಕೆಯ ಒಂದು ಮುಖ್ಯ ಮಿಶ್ರಕ. ಇದು ಹಸಿ ಪಿಂಗಾಣಿ ಮೈಕಟ್ಟನ್ನು ಬೇಯಿಸುವಾಗ ಅದು ಸಂಕೋಚಗೊಳ್ಳದಂತೆ ಮಾಡುವುದೇ ಅಲ್ಲದೆ ಬೆಂದ ಪಿಂಗಾಣಿಗೆ ಗಡಸನ್ನೂ ಬಲವನ್ನೂ ತಂದುಕೊಡುತ್ತದೆ. ಹರಳೀಕೃತ ಬೆಣಚು ಅಥವಾ ಮರಳನ್ನು ಪುಡಿಮಾಡಿ ಇದನ್ನು ಸಿದ್ಧಗೊಳಿಸುತ್ತಾರೆ. ಪ್ರಪಂಚದಲ್ಲೆಲ್ಲ ಇದು ಹೇರಳವಾಗಿ ಸಿಗುತ್ತದೆ. ಅಮೆರಿಕದ ಇಲಿನಾಯ್, ಪಶ್ಚಿಮ ವರ್ಜಿನಿಯ ಮತ್ತು ಪೆನ್ಸಿಲ್‍ವೇನಿಯಗಳಲ್ಲೂ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಗುರಮಠಕಲ್, ಬೆಳಗಾಂವಿ ಜಿಲ್ಲೆಯ ಎಲ್ಲೂರುಗಳಲ್ಲೂ ಪುಣೆ, ನಾಗಪುರ, ಚಿಂದವಾರಗಳಲ್ಲೂ ಇದು ಹೇರಳವಾಗಿ ದೊರೆಯುತ್ತದೆ.

	ಫೆಲ್‍ಸ್ಟಾರ್ ಎಂಬುದು ಬಿಳಿ ಅಥವಾ ನಸುಗೆಂಪು ಸ್ಫಟಿಕಾಕೃತಿಯ ಖನಿಜ ವಿಶೇಷ. ಕೈಗಾರಿಕಾ ಕ್ಷೇತ್ರದಲ್ಲಿದನ್ನು ಸ್ಟಾರ್ ಎನ್ನುತ್ತಾರೆ. ಮೂಲ ಚೀನೀ ಜೇಡಿಯ ಮಿಶ್ರಣಗಳನ್ನು ಒಂದುಗೂಡಿಸುವಲ್ಲಿ ಇದು ಅಭಿವಹನ ವಸ್ತುವಾಗಿ ಕೆಲಸ ಮಾಡುತ್ತದೆ. ಪಿಂಗಾಣಿ ಜೇಡಿಯನ್ನು ಬೇಯಿಸುವಾಗ ಇದು ಮೊದಲು ಕರಗಿ, ಉಳಿದ ಮಿಶ್ರಣಗಳನ್ನು ಕರಗಿಸಿ ಒಂದುಗೂಡಿಸುತ್ತದೆ; ಬೆಂದು ತಣ್ಣಗಾಗುತ್ತಿರುವ ಪಿಂಗಾಣಿಯಲ್ಲಿ ಗಡಸಾಗುತ್ತಾ ಉಳಿದ ಮಿಶ್ರಣಗಳನ್ನೂ ಬಂಧಿಸಿ, ಮೂಲ ಮಿಶ್ರಣ ಹೆಚ್ಚು ಗಡಸಾಗುವಂತೆಯೂ ಪಾರದರ್ಶಕವಾಗುವಂತೆಯೂ ಮಾಡುತ್ತವೆ.

	ಪೇಲ್‍ಸ್ಟಾರ್ ವ್ಯಾಪಾರಿಗಳು ಕೊಂಡಕೊಳ್ಳಬಯಸುವವರ ಅಪೇಕ್ಷೆಗನುಗುಣವಾಗಿ ಪೊಟ್ಯಾಷ್ ಅಥವಾ ಕ್ಲಾರೀಯ ಸ್ಟಾರ್‍ಗಳನ್ನು ಒದಗಿಸುತ್ತಾರೆ. ಪಿಂಗಾಣಿ ತಯಾರಿಕೆಯಲ್ಲಿ ಪೋಟ್ಯಾಷ್ ಸ್ಟಾರ್‍ಗಳ ಬಳಕೆಯೇ ಹೆಚ್ಚು. ಅಮೆರಿಕದಲ್ಲಿ ಬಳಸುವ ಫೆಲ್‍ಸ್ಟಾರ್‍ಗಳನ್ನು ಉತ್ತರ ಕೆರೊಲೀನ ಉತ್ಪತ್ತಿ ಮಾಡುತ್ತದೆ. ಬೆಂಗಳೂರು ಪಿಂಗಾಣಿ ಕಾರ್ಖಾನೆಯಲ್ಲಿ ಬಳಸುವ ಸ್ಟಾರ್‍ಗಳನ್ನು ಗೊಲ್ಲಹಳ್ಳಿ, ಅರ್ಜುನಹಳ್ಳಿ ಪ್ರದೇಶಗಳಿಂದ ತರುತ್ತಾರೆ.

	ಚೀನೀ ಪಿಂಗಾಣಿ ಅಥವಾ ಕಾರ್ನ್‍ವಾಲ್ ಶಿಲೆ; ಇಂಗ್ಲೆಂಡಿನ ಕಾರ್ನ್‍ವಾಲ್ ಪ್ರದೇಶದಲ್ಲಿ ಹೇರಳವಾಗಿ ದೊರೆಯುತ್ತದೆ. ಇದರಲ್ಲಿ 20% ರಿಂದ 30% ರಷ್ಟು ಎಲುಬು ಭಸ್ಮವಿದೆ. ಪಿಂಗಾಣಿ ವಸ್ತುಗಳಿಗೆ ಮೆರಗು ಕೊಡುವಲ್ಲಿಯೂ ಮೈಕಟ್ಟನ್ನು ಸಿದ್ಧಗೊಳಿಸುವಲ್ಲಿಯೂ ಇದು ಅಭಿವಾಹಕವಾಗಿ ಕೆಲಸ ಮಾಡುತ್ತದೆ. ದನಕರುಗಳ ಮೂಳೆಗಳನ್ನು ಸಂಗ್ರಹಿಸಿ, ಅವುಗಳಲ್ಲಿರುವ ನೀರಿನ ಅಂಶ ಹೋಗುವವರೆಗೂ ಉರಿಸಿ ಅಥವಾ ಸುಟ್ಟು, ನುಣುಪಾಗುವಂತೆ ಕುಟ್ಟಿ ಪುಡಿ ಮಾಡಿದಾಗ ಎಲುಬು ಭಸ್ಮ ಸಿಗುತ್ತದೆ. ಇದರಲ್ಲಿ ಕ್ಯಾಲ್ಸಿಯಮ್ ಫಾಸ್ಪೇಟ್ ಇರುತ್ತದೆ. ಎತ್ತಿನ ಮೂಳೆಗಳು ಈ ಭಸ್ಮ ತಯಾರಿಕೆಗೆ ತುಂಬ ಉಪಯುಕ್ತವಾದವುಗಳೆಂಬುದು ಕುಂಭತಜ್ಞರ ಮತ. ಇಂಗ್ಲೆಂಡಿನ ಪಿಂಗಾಣಿ ವಸ್ತುವಿನಲ್ಲಿ ಇದು 25%-10% ರಷ್ಟು ಸೇರಿರುತ್ತದೆ. ಮೂಲ ಜೇಡಿ ಮಿಶ್ರಣದಲ್ಲಿ ಇದು ಅಭಿವಾಹಕವಾಗಿ ಕೆಲಸ ಮಾಡುವುದರ ಜೊತೆಗೆ ಸಿದ್ಧ ಪಾತ್ರೆಗಳಿಗೆ ಹೆಚ್ಚಿನ ಪಾರದರ್ಶಕತೆಯನ್ನೂ ತಂದುಕೊಡುತ್ತದೆ. ಸುದ್ದೆ ಜೇಡಿಗೆ ಇದನ್ನು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಸೇರಿಸಿದರೆ ಪಿಂಗಾಣಿ ಮೈಕಟ್ಟು ಬೇಯುವಾಗ ಉಂಟಾಗಬಹುದಾದ ವಿರೂಪ, ವಕ್ರಗಳು ತಪ್ಪುತ್ತದೆ.

	ಇವಷ್ಟೇ ಅಲ್ಲದೆ ಬೇರೆ ಬೇರೆ ಪೂರಕ ಮಿಶ್ರಣಗಳನ್ನು ಮೂಲ ಜೇಡಿಗೆ ಸೇರಿಸುತ್ತಾರೆ. ಅವುಗಳಲ್ಲಿ ಡಾಲೊಮೈಟ್, ಬೆಂಟೊನೈಟ್ ಜಿಗುಟನ್ನು ತರುವ ಟಾಲ್ಕ್ ಅಥವಾ ಮೆಗ್ನೀಷಿಯಮ್ ಸಿಲಿಕೇಟ್ ಮತ್ತು ನೆಫಲಿನ್ ಸಯೋನೈಟುಗಳು ಮುಖ್ಯವಾದ ಕೆಲವು.

	ಅಮೆರಿಕದಲ್ಲಿ ಗೃಹೋಪಯೋಗಿ ಪಿಂಗಾಣಿ ವಸ್ತುಗಳನ್ನು ಮಾಡುವಾಗ ಸುದ್ದೆ ಜೇಡಿ 4% ಮುದ್ದೆ ಜೇಡಿ 10% ಫೆಲ್‍ಸ್ಟಾರ್ 30%, ಫ್ಲಿಂಟ್ 18%, ಡಾಲೊಮೈಟ್ 2% ಈ ಮಿಶ್ರಣದಿಂದ ತಯಾರಾದ ಪಿಂಗಾಣಿ ಮೈಕಟ್ಟ 12700ಅ ವರೆಗೆ ಉಷ್ಣತೆಯಲ್ಲಿ ತಯಾರಾಗುತ್ತದೆ. ಸಾರ್ವಜನಿಕ ಭೋಜನ ಗೃಹಗಳಲ್ಲಿ ಬಳಸುವ ಪಿಂಗಣಿ ಪಾತ್ರೆಗಳನ್ನು ಈ ಮಿಶ್ರಣ ಸೂತ್ರದಿಂದ ತಯಾರಿಸುತ್ತಾರೆ ; ಸುದ್ದೆಜೇಡಿ 29.5%, ಮುದ್ದೆಜೇಡಿ 13%, ಫೆಲ್‍ಸ್ಟಾರ್ 21%, ಫ್ಲಿಂಟ್ 35%, ಸುಣ್ಣ 1.5% ಇದರ ಹಸಿ ಮೈಕಟ್ಟನ್ನು 12700 ಆ ಉಷ್ಣತೆಯಲ್ಲೂ, ಮೆರಗಣ್ಣು 11500 ಆ ಉಷ್ಣತೆಯಲ್ಲೂ ಬೇಯಿಸುತ್ತಾರೆ.

	18ನೆಯ ಶತಮಾನಕ್ಕೆ ಮೊದಲೆ ಇಂಗ್ಲೆಂಡಿನ ಬೋಪ್ ಜೆಲ್‍ಸಿ ಸ್ಥಾವರಗಳಲ್ಲಿ ಚೀನೀ ಪಿಂಗಾಣಿಯನ್ನು ಪ್ರಾಯೋಗಿಕವಾಗಿ ಉತ್ಪಾದಿಸಿದರು. ಅಲ್ಲಿಂದೀಚೆಗೆ ಪಿಂಗಾಣಿ ಉದ್ಯಮ ಅಧಿಕ ಪ್ರಮಾಣದಲ್ಲಿ ಬೆಳೆಯಿತು.
ಮೈಕಟ್ಟು ತಯಾರಿಕೆ : ತಯಾರು ಮಾಡಬೇಕಾದ ಪಿಂಗಾಣಿ ಪಾತ್ರೆಗಳಿಗೆ ಅಗತ್ಯವಾದ ಮಿಶ್ರಣ ಸೂತ್ರವನ್ನು ನಿರ್ಧರಿಸಿ, ಮಿಶ್ರಣಮಾಡಿ, ಇವುಗಳ ಜೊತೆಗೆ ಪೂರಕ ಘಟಕಾಂಶಗಳನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ಮಿಶ್ರಣವನ್ನು ಶುದ್ಧಿಗೊಳಿಸಿ, ಸಂಸ್ಕರಣವಾದ ಮೇಲೆ ಅಗತ್ಯ ಪಾತ್ರೆಗಳ ರೂಪ ಕೊಡಲು ಅನುಕೂಲವಾಗುವಂತೆ ಸುಸಂಗತಗೊಳಿಸಿ ಸಿದ್ಧಪಡಿಸಬೇಕು. ಈ ಶುದ್ಧೀಕರಣ ಹಲವು ಮಜಲುಗಳಲ್ಲಿ ನಡೆಯುತ್ತದೆ. ಇದು ತಯಾರಾಗುವ ಪಾತ್ರೆಗಳಿಗನುಗುಣವಾಗಿ ಒಂದು ಸ್ಥಾವರದಿಂದ ಮತ್ತೊಂದು ಸ್ಥಾವರಕ್ಕೆ ತಯಾರಿಕಾ ಕ್ರಮದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸರಿಸುಮಾರಾಗಿ ಅನುಸರಿಸುವ ಪದ್ಧತಿಯನ್ನು ಇಲ್ಲಿ ನೋಡಬಹುದು. ಮೊದಲು ಪಿಂಗಾಣಿ ಜೇಡಿ ಅಥವಾ ಮೂಲ ಜೇಡಿಯನ್ನು ನೀರಿನಲ್ಲಿ ಸೇರಿಸಿ ತಿರುಗು ಯಂತ್ರದಲ್ಲಿ ಕಲಸುತ್ತಾರೆ. ಆನಂತರ ಮೈಕಟ್ಟನ್ನು ತಯಾರಿಸಲು ಸಿದ್ಧಗೊಳಿಸಿರುವ ಜೇಡಿಯನ್ನು ಅಗತ್ಯಕ್ಕೆ ಬೇಕಾದಷ್ಟು ನುಣುಪುಗೊಳಿಸಲು ಅರೆಯುವ ಯಂತ್ರಗಳಿಗೆ ಹಾಕಿ ಅರೆಯುತ್ತಾರೆ.

	ಆಮೇಲೆ ಸಾಲುಸಾಲಾಗಿ ಜರಡಿಗಳನ್ನು ಅನುಗೊಳಿಸಿ ಮಿಶ್ರ ಜೇಡಿಯನ್ನು ಜರಡಿಯಾಡಿಸುತ್ತಾರೆ. ಅರೆಯುವ ಯಂತ್ರದಲ್ಲಿ ಉಳಿದಿರಬಹುದಾದ ಕಲ್ಮಷಗಳು ಇಲ್ಲಿ ಬೇರೆಯಾಗುತ್ತವೆ. ಮಿಶ್ರಣದಲ್ಲಿರುಬಹುದಾದ ಕಬ್ಬಿಣದ ಪುಡಿಯನ್ನು ಪ್ರತ್ಯೇಕಿಸಲು ತೀಕ್ಷ್ಣವಾದ ವಿದ್ಯುತ್‍ಕಾಂತವನ್ನು ಬಳಸುತ್ತಾರೆ. ಮಿಶ್ರಣದಲ್ಲಿ ಕಬ್ಬಿಣದ ಅಂಶ ಉಳಿದು ಹೋದರೆ ಮೈಕಟ್ಟನ್ನು ಬೇಯಿಸಿದಾಗಾಗಲಿ, ಮೆರುಗು ಕೊಟ್ಟ ಮೇಲಾಗಲಿ ಸಿದ್ಧ ಪಿಂಗಾಣಿ ಪಾತ್ರೆಗಳ ಮೇಲೆ ಕಂದು ಅಥವಾ ಕಪ್ಪು ಚಿಕ್ಕೆಗಳು ಮೂಡಿ ಅಂದಗೆಡುತ್ತದೆ. ಇದಾದ ಮೇಲೆ ನೀರು ತೆಗೆಯುವ ಕೆಲಸ. ಅಗತ್ಯಕ್ಕಿಂತ ಹೆಚ್ಚಾದ ನೀರನ್ನು ಮಿಶ್ರಣದಿಂದ ಹೊರತೆಗೆಯಲು ಬಸಿಯುವ ಲೋಹದ ಹಲಗೆಗಳನ್ನು ಬಳಸಿ, ಮಿಶ್ರಣವನ್ನು ಅದರ ಮೇಲೆ ಸುರಿದು ಒತ್ತುತ್ತಾರೆ. ಆಗ ನೀರೆಲ್ಲ ಬಸಿದು ಉಳಿದ ಜೇಡಿ ಮೆತುವಾಗಿ, ಸಾಕಷ್ಟು ಜಿಗುಟಾಗುತ್ತದೆ. ಮಿಶ್ರಣದಲ್ಲಿ ಸೇರಿರುವ ಗಾಳಿ ಗುಳ್ಳೆಗಳನ್ನು ಮೈಕಟ್ಟು ತಯಾರಿಸುವ ಮುಂಚೆಯೇ ತೆಗೆದಿರುತ್ತಾರೆ. ಸಂಗ್ರಹಿಸಿಡಲು ಅನುಕೂಲವಾಗುವಂಥ ಹಲಗೆಗಳನ್ನಾಗಿ ಇದನ್ನು ಕತ್ತರಿಸಿ, ಜೋಡಿಸಿಡುತ್ತಾರೆ.

	ಪಿಂಗಾಣಿ ತಯಾರಿಕೆ ಮೊದಮೊದಲು ಮಾನವ ಶ್ರಮದಿಂದಲೇ ಚಿಕ್ಕ ಚಿಕ್ಕ ಯಂತ್ರಗಳಿಂದ ನಡೆಯುತ್ತಿತ್ತು. ಬೇಡಿಕೆ ಹೆಚ್ಚಿದಂತೆ ತಯಾರಿಕೆಯನ್ನು ತೀವ್ರಗೊಳಿಸಬೇಕಾಗಿ ಬಂದುದರಿಂದ ದೊಡ್ಡ ದೊಡ್ಡ ಯಂತ್ರಗಳ ನಿರ್ಮಾಣ ಅನಿವಾರ್ಯವಾಯಿತು. ಇಂದು ಬಹುಮಟ್ಟಿಗೆ ಸ್ವಯಂಚಾಲಿತ ಯಂತ್ರಗಳೇ ಈ ಕಾರ್ಯವನ್ನು ನಿರ್ವಹಿಸುತ್ತವೆ.

	ಕುಂಭ ತಯಾರಿಕೆ : ಕಲಾತ್ಮಕ ಹಾಗೂ ಗೃಹೋಪಯೋಗಿ ಕುಂಭಗಳ ತಯಾರಿಕಾ ವಿಧಾನಗಳು ಹೀಗಿವೆ : 1. ಕುಂಬಾರ ಚಕ್ರ ಅಥವಾ ಸನ್ನೆ ಚಕ್ರ, 2. ಜಾಲಾಟದ ವಂದರಿ ಪೆಟ್ಟಿಗೆ, 3. ಜಾರು ಅಚ್ಚು, 4. ಒತ್ತು ಎರಕ.

	1. ಕುಂಬಾರ ಚಕ್ರ ಅಥವಾ ಸನ್ನೆ ಚಕ್ರ : ಪಿಂಗಾಣಿ ಕುಂಭ ತಯಾರಿಕೆಯಲ್ಲೂ ಸಾಮಾನ್ಯ ಕುಂಬಾರನ ಕ್ರಮವನ್ನೇ ಅನುಸರಿಸುತ್ತಾರೆ. ಜೇಡಿಯನ್ನು ತಟ್ಟೆಯ ಮೇಲಿಟ್ಟು ಯಾವ ಆಕಾರ ಬೇಕೋ ಆ ಆಕಾರವನ್ನು ಕುಶಲಿ ಕುಂಭತಜ್ಞ ರೂಪಿಸುತ್ತಾನೆ. ಈ ಚಕ್ರವನ್ನು ಸನ್ನೆಯ ಸಹಾಯದಿಂದಲಾದರೂ ತಿರುಗಿಸಬಹುದು. ಬೇರೆ ಬೇರೆ ಆಕಾರದ ವಿಶೇಷ ಕುಂಭಗಳನ್ನು ತಯಾರಿಸಲು ಈ ಪದ್ಧತಿ ತುಂಬ ಅನುಕೂಲವಾದುದು. ಒಂದೇ ಆಕಾರದ ಸಹಸ್ರಾರು ಪಾತ್ರೆ ಅಥವಾ ಕುಂಭಗಳನ್ನು ತಯಾರಿಸಲು ಇದು ಸೂಕ್ತ ಪದ್ಧತಿಯಲ್ಲ. ಕುಂಭ ತಯಾರಾದ ಮೇಲೆ ಅದನ್ನು ತಟ್ಟೆಯಿಂದ ಹೊರತೆಗೆದು ಆರಲು ಇಡುತ್ತಾರೆ. ಚರ್ಮದಂತೆ (ಹಿಗ್ಗಿ ಕುಗ್ಗುವಷ್ಟು) ಒಣಗಿದ ಮೇಲೆ, ಬೇರೆಯಾಗಿ ತಯಾರಿಸಿದ ಕುಂಭದ ವಿವಿಧ ಭಾಗಗಳನ್ನು ಈ ಕುಂಭಕ್ಕೆ ಹೊಂದಿಸುತ್ತಾರೆ.

	2. ಜಾಲಾಟದ ವಂದರಿ ಪೆಟ್ಟಿಗೆ : ಯಾಂತ್ರೀಕೃತ ಸನ್ನೆ ಚಕ್ರವನ್ನುಳ್ಳ ಈ ಯಂತ್ರದ ಮೂಲಕ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಒಂದೇ ಆಕಾರದ ಸಹಸ್ರಾರು ಪಾತ್ರೆಗಳನ್ನು ತಯಾರಿಸುತ್ತಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ, ಮಾಡಬೇಕಾದ ಪಾತ್ರೆಯ ಹೊರಮೈ ಆಕಾರದ ಅಚ್ಚುಗಳನ್ನು ತಯಾರಿಸಿ ಅವನ್ನು ಸನ್ನೆ ಚಕ್ರದ ಮಧ್ಯೆ ಜೋಡಿಸುತ್ತಾರೆ. ತಯಾರಿಸಲು ಸಿದ್ಧವಾಗಿರುವ ಜೇಡಿಯನ್ನು ಅಚ್ಚಿನ ತುಂಬ ಹೊಯ್ಯುತ್ತಾರೆ. ಪಾತ್ರೆಯ ಒಳ ಭಾಗದ ಆಕಾರವನ್ನು ಮಾಡಿರುವ ಅಚ್ಚನ್ನು ಯಂತ್ರದ ಮೇಲುಭಾಗದಲ್ಲಿ ಎಳೆದತ್ತ ಬರುವ ಲೋಹ ಹಸ್ತಗಳಿಗೆ ಜೋಡಿಸಿರುತ್ತಾರೆ. ಚಕ್ರ ತಿರುಗಲು ಆರಂಭವಾದಂತೆ ಈ ಮೇಲಿನ ಅಚ್ಚನ್ನು ಜೇಡಿ ತುಂಬಿರುವ ಒಳಭಾಗಕ್ಕೆ ಇಳಿಸುತ್ತಾರೆ. ಕೆಳಗಿನ ಅಚ್ಚು ತಿರುಗುತ್ತಿರುವುದರಿಂದ ಇದನ್ನು ನಿಧಾನವಾಗಿ ಕೆಳಗಿಳಿಸಿದಾಗ ಹೆಚ್ಚಿನ ಜೇಡು ಹೊರಬಂದು ಒಳಪಾತ್ರೆಯ ಆಕಾರ ಮೂಡುತ್ತದೆ. ಜೇಡಿ ಈ ಎರಡು ಅಚ್ಚುಗಳ ಸಹಾಯದಿಂದ ಪಾತ್ರೆಯ ಆಕಾರವನ್ನು ತಾಳುತ್ತದೆ. ಪಾತ್ರೆ ಸಿದ್ಧವಾದ ಮೇಲೆ ಅದನ್ನು ಚಕ್ರದಿಂದ ಹೊರತೆಗೆದು, ಸ್ವಲ್ಪ ಆರಿದ ಮೇಲೆ ಅದರ ಉಳಿದ ಭಾಗಗಳನ್ನು ಲಗತ್ತಿಸುತ್ತಾನೆ. ಈ ಕ್ರಮದಲ್ಲಿ ಬಟ್ಟಲು ಕುಂಭ ಇತ್ಯಾದಿಗಳನ್ನು ತಯಾರಿಸಬಹುದು.

	ಕುಳಿ ಬಿದ್ದ ಪಟ್ಟಿ ತಯಾರಿಸುವಲ್ಲಿ ಅಚ್ಚುಗಳ ಮಾದರಿ ಅದಲು ಬದಲಾಗುತ್ತದೆ. ಚಕ್ರದ ಮೇಲಿರುವ ಅಚ್ಚನ್ನು ತಟ್ಟೆಯ ಒಳಭಾಗದ ಆಕಾರದಲ್ಲೂ ಮೇಲಿನ ಅಚ್ಚನ್ನು ತಟ್ಟೆಯ ಹೊರಭಾಗದ ಮಾದರಿಯಲ್ಲೂ ಮಾಡಿರುತ್ತಾರೆ. ಮೊಟ್ಟೆಯ ಆಕಾರದ ಪಾತ್ರೆಗಳನ್ನು ತಯಾರಿಸುವಲ್ಲಿ ವಿಷಮ ಕೇಂದ್ರದಲ್ಲಿ ಸುತ್ತುವ ಚಕ್ರವನ್ನು ಬಳಸಿಕೊಳ್ಳುತ್ತಾರೆ. ಸ್ವಯಂ ಚಾಲಿತ ಅಚ್ಚು ಯಂತ್ರಗಳಿಂದ ದಿನವೊಂದಕ್ಕೆ 240,000 ಭೋಜನೋಪಯೋಗಿ ಪಿಂಗಾಣಿ ಪಾತ್ರೆಗಳನ್ನು ತಯಾರಿಸಿದ ದಾಖಲೆ ಇದೆ.

	3. ಜಾರು ಅಚ್ಚು : ಒಂದೇ ರೀತಿಯ ಸಹಸ್ರಾರು ಪಿಂಗಾಣಿ ಪಾತ್ರೆ ತಯಾರಿಕೆಗೆ ಇದು ಅತ್ಯಂತ ಸರಳ ಹಾಗೂ ಸುಲಭ ವಿಧಾನ. ಬಿಡಿ ಭಾಗಗಳ ತಯಾರಿಕೆಯಲ್ಲೂ ಇದು ಅಷ್ಟೇ ಪ್ರಮುಖವಾದುದು ಟೀ ಮತ್ತು ಕಾಫಿ ಕುಂಭ ಹಾಗೂ ಬಸಿ, ಬಟ್ಟಲುಗಳನ್ನು ಈ ಪದ್ಧತಿಯಿಂದ ತಯಾರಿಸುತ್ತಾರೆ. ಜಾರು ಅಚ್ಚಿನಲ್ಲಿ ಜೋಡಿಸುವ ಕುಂಭದ ಅಥವಾ ಬಟ್ಟಲಿನ ಮಾದರಿ ಅಚ್ಚುಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಅವುಗಳ ಹೊರಭಾಗದ ಆಕಾರಕ್ಕೆ ಸರಿಯಾಗಿ ಮಾಡಿರುತ್ತಾರೆ. ಇಂಥ ಅಚ್ಚುಗಳನ್ನು ಸಿದ್ಧಪಡಿಸುವವ ತುಂಬ ಕುಶಲಿಯಾಗಿರಬೇಕು.

	ಸುಮಾರು ಅರ್ಧ ಗಂಟೆ ಆರಿದ ಮೇಲೆ ಅಚ್ಚಿನಿಂದ ಪಾತ್ರೆಯನ್ನು ಹೊರತೆಗೆದು, ಒಳಗೆ ಅದರ ಮೈಗೆ ಅಂಟಿಕೊಂಡಿರಬಹುದಾದ ಹೆಚ್ಚಿನ ಜೇಡಿಯನ್ನು ಕೆರೆದು ಹಾಕಬೇಕು. ಗಾಳಿಯಿಂದ ಬಿದ್ದಿರಬಹುದಾದ ಕುಳಿಗಳನ್ನು ಮುಚ್ಚಿ, ತಲೆ ಮತ್ತು ತಳಭಾಗದ ಕಂಠಗಳನ್ನು ಸುತ್ತು ಚಕ್ರದ ಸಹಾಯದಿಂದ ಸಾಕಾರಗೊಳಿಸಿ ಕುಂಭ ಸಿದ್ಧಪಡಿಸಬೇಕು. ಆನಂತರ ಅದಕ್ಕೆ ಅಗತ್ಯವಿರುವ ಬೇರೆ ಬೇರೆ ಭಾಗಗಳನ್ನು ಅಂಟಿಸಬೇಕು. ಈಗ ಕುಂಭ ಬೇಯಿಸಲು ಸಿದ್ಧವಾಗುತ್ತದೆ.

	ಆಕೃತಿಗಳನ್ನೋ ಮೂರ್ತಿರೂಪಗಳನ್ನೋ ತಯಾರಿಸಬೇಕಾದಾಗ ಆಕೃತಿಯ ವಿವಿಧ ಭಾಗಗಳ ಬೇರೆ ಬೇರೆ ಅಚ್ಚುಗಳನ್ನು ಮಾಡುತ್ತಾರೆ. ವಿವಿಧ ಎರಕಗಳಲ್ಲಿ ಅಚ್ಚಾಗಿ ಬಂದ ಆಕೃತಿಗಳನ್ನೂ ಅವು ಇನ್ನೂ ಮೆತುವಾಗಿ ಇರುವಾಗಲೇ ರೂಪಕ್ಕೆ ತಕ್ಕಂತೆ ಜೋಡಿಸುತ್ತಾರೆ. ಜೋಡಿಸಿದ ಭಾಗಗಳನ್ನು ಕ್ರಮಪಡಿಸಿ ಆರಲು ಇಡುತ್ತಾರೆ.

	4. ಒತ್ತು ಎರಕ : ಪ್ಲಾಸ್ಟರ್ ಆಫ್ ಪ್ಯಾರಿಸ್ ಅಚ್ಚುಗಳನ್ನು ಮಾಡಿಕೊಂಡು ಒತ್ತಿ ಒತ್ತಿ ಪಾತ್ರೆಗಳನ್ನೋ ತಯಾರಿಸುತ್ತಾರೆ. ಅತಿ ಒಣಗಿದ ಮಿಶ್ರ ಜೇಡಿಯನ್ನು ಇಲ್ಲಿ ಬಳಸುತ್ತಾರೆ. ಹಂಚು, ಇಟ್ಟಿಗೆ ಮತ್ತು ವಿದ್ಯುದ್‍ವಾಹಕ ಪಿಂಗಾಣಿ ವಸ್ತುಗಳನ್ನು ತಯಾರಿಸಲು ಈ ಪದ್ಧತಿ ಒಳ್ಳೆಯದು, 1960ರಿಂದ ಈಚೆಗೆ, ಇವನ್ನು ತಯಾರಿಸಲು ಸ್ವಯಂಚಾಲಿತ ಯಂತ್ರಗಳು ಸ್ಥಾಪಿತವಾಗಿವೆ.

	ತಿರುಗಣೆ ಯಂತ್ರ: ಸನ್ನೆ ಚಕ್ರದ ಪ್ರತಿರೂಪವಾದ ಇದನ್ನು ಹಸಿ ಕುಂಭಗಳನ್ನು ಸಂಸ್ಕರಿಸಲು ಉಪಯೋಗಿಸುತ್ತಾರೆ. ಅಚ್ಚಿನಿಂದ ಹೊರಬಂದ ಪಾತ್ರೆಗಳನ್ನು ಸ್ವಲ್ಪ ಆರಿಸಿ, ಅದು ಚರ್ಮದಂತೆ ಹಿಗ್ಗುವಂತಾದಾಗ ಈ ತಿರುಗಣೆ ಚಕ್ರದ ಮೇಲಿಟ್ಟುಕೊಳ್ಳುತ್ತಾರೆ. ಲೋಹದ ಉಪಕರಣಗಳನ್ನು ಬಳಸಿ ಅನಗತ್ಯ ಜೇಡಿಯನ್ನು ಹೆರೆದು ಹಾಕಿ, ತಳ ಮತ್ತು ಕಂಠ ಭಾಗಗಳ ಅಚ್ಚು ದೋಷವನ್ನು ಸರಿಪಡಿಸಿ ಸಂಸ್ಕರಣಗೊಳಿಸಲು ಈ ಯಂತ್ರ ಅಗತ್ಯ. ಒತ್ತು ಯಂತ್ರದಿಂದ ಹೊರಬಂದ ಬಿಡಿಭಾಗಗಳಿಗೆ ರೂಪ ಕೊಡುವಲ್ಲಿಯೂ ಇದರ ಬಳಕೆ ಇದೆ. ಲೋಹ ವಸ್ತುಗಳನ್ನು ಸಂಸ್ಕರಿಸಲು ಬಳಸುವ ಲೇತುಗಳನ್ನು ಇಲ್ಲಿಯೂ ಬಳಸಬಹುದಾದರೂ ಕೆಲಸಗಾರ ತುಂಬ ಪರಿಣಿತನೂ ಕುಶಲಿಯೂ ಆಗಿರಬೇಕು. ಇಷ್ಟು ಆದಮೇಲೆ ಕುಂಭ ಅಥವಾ ಪಿಂಗಾಣಿ ಪಾತ್ರೆ ಬೇಯಿಸಲು ಸಿದ್ಧವಾಗುತ್ತದೆ.

	ಹಸಿ ಕುಂಭಗಳನ್ನು ಬೇಯಿಸುವ ಕ್ರಮ : 1 ಒಲೆ ಗೂಡು ಹಾಕುವುದು ; ಬೇಯಿಸಲು ತಯಾರಾಗಿರುವ ಎಲ್ಲ ಪಾತ್ರೆಗಳನ್ನೂ ಒಲೆಯೊಳಗೆ ಅಥವಾ ಆವಿಗೆಯಲ್ಲಿ ಕ್ರಮವಾಗಿ ಜೋಡಿಸಬೇಕು. ಜೋಡಣೆ ಸ್ವಲ್ಪ ಹೆಚ್ಚುಕಡಿಮೆಯಾದರೂ ಪಾತ್ರೆಗಳು ಅಂದಗೆಟ್ಟು ವಿಕಾರವಾಗಿ, ಅರೆ ಬೆಂದು, ಬಣ್ಣ ಕಂದಿ ಅನುಪಯುಕ್ತವಾಗುತ್ತವೆ. ಈ ಕೆಲಸ ಮಾಡುವವರು ವಿಶೇಷ ತಜ್ಞರೇ ಆಗಿರಬೇಕು. ಸಿಕತದಿಂದ ಮಾಡಿದ ಸಿಂಬೆ ಅಥವಾ ಪಾದುಕೆಗಳ ಮೆಲೆ ಹಸಿ ಪಿಂಗಾಣಿ ಪಾತೆಗಳನ್ನಿಟ್ಟು, ಸುತ್ತಲೂ ಒಂದಕ್ಕೊಂದು ತಾಕದಂತೆ, ಅಲುಗಾಡದಂತೆ ಒತ್ತೆ ಕೊಟ್ಟು ಜೋಡಿಸುತ್ತಾರೆ. ನಾಜೂಕಾದ ಕಲಾತ್ಮಕ ಪಿಂಗಾಣಿ ಪಾತ್ರೆಗಳಿಗೆ ಆವಿಗೆಯ ಉಷ್ಣ ನೇರವಾಗಿ ತಾಗದಂತೆ ಮಾಡಲು ವಿಶಿಷ್ಟ ಪೆಟ್ಟಿಗೆಗಳೊಳಗಿಟ್ಟು ಹದವಾಗಿ ಬೇಯಿಸುತ್ತಾರೆ. ಈ ಪೆಟ್ಟಿಗೆಗಳನ್ನು ಬಳಸುವುದರಿಂದ ಅನಗತ್ಯವಾಗಿ ಒಡೆದು ಹೋಗುವುದನ್ನು ತಪ್ಪಿಸಬಹುದು.

	ಹಿಂದೆ ಬಳಸುತ್ತಿದ್ದ ಸುಟ್ಟ ಮಣ್ಣಿನ ಕೋಶಗಳಿಗೆ ಬದಲಾಗಿ 1960ರಿಂದೀಚೆಗೆ ಸಿಲಿಕಾನ್ ಕಾರ್ಬೈಡ್ ಪೀಠೋಪಕರಣಗಳನ್ನೇ ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದಾರೆ. ಇವು ಹೆಚ್ಚು ಭಾರವನ್ನು ಭರಿಸಬಲ್ಲವು.

	ಆವಿಗೆಯೊಳಗಿನ ಉಷ್ಣತೆಯನ್ನು ಪೈರೋಮೀಟರ್ ಉಷ್ಣಮಾಪಕಗಳಿಂದ ಕಂಡುಕೊಳ್ಳುತ್ತಾರೆ. ಎರಡು ರೀತಿಯ ಪೈರೋಮೀಟರ್‍ಗಳಿರುತ್ತವೆ. ಒಂದು ಕುಲುಮೆ ಒಳಗಿನ ಉಷ್ಣತೆಯನ್ನು ತೋರಿಸಿದರೆ ಮತ್ತೊಂದು ಒಲೆಯೊಳಗಿರುವ ಪಿಂಗಾಣಿ ಪಾತ್ರೆಯೊಳಗಿನ ಉಷ್ಣತೆಯನ್ನು ತೋರಿಸುತ್ತದೆ.

	ಬೇಯಿಸುವ ವಿಧಾನ: ಮಬ್ಬು ಬಣ್ಣದ ಹಸಿ ಪಿಂಗಾಣಿ ಜೇಡಿ ಬೆಳ್ಳಗೆ ಮಿರಮಿರನೆ ಹೊಳೆಯುವ ಗಾಜಿನಂಥ ಪಾತ್ರೆಗಳಾಗುವುದು. ಅವನ್ನು ತಕ್ಕ ಹದದಲ್ಲಿ ಬೇಯಿಸುವುದರಿಂದ. ಒಂದು ಪಾತ್ರೆ ಮೂರು ಹಂತಗಳಲ್ಲಿ ಬೇಯುತ್ತದೆ. ಹಸಿ ಪಿಂಗಾಣಿ ಜೇಡಿಯನ್ನು ಬೆಂದ ಪಾತ್ರೆ ಮಾಡಲು ಒಮ್ಮೆ, ಬೆಂದ ಪಾತ್ರೆಗೆ ಮೆರುಗು ಲೇಪನ ಹಾಕಿ ಮೆರಗು ಕೊಡುವಾಗ ಮತ್ತೊಮ್ಮೆ, ಮೆರುಗು ಕೊಟ್ಟ ಪಾತ್ರೆಗೆ ಕುಸುರಿ ಕೆಲಸ ಮಾಡಿ ಬಣ್ಣ ಹಾಕಿ ಅದನ್ನು ಸ್ಥಿರಗೊಳಿಸಲು ಮಗದೊಮ್ಮೆ-ಹೀಗೆ ಮೂರು ಬಾರಿ ಬೇಯುತ್ತದೆ. ಈ ಒಂದೊಂದು ಹಂತಕ್ಕೂ ಗರಿಷ್ಠ ಉಷ್ಣತೆಯ ಮಿತಿ ಗೊತ್ತಾಗಿರುತ್ತದೆ. ಕನಿಷ್ಠ 6000ಅ ಯಿಂದ ಗರಿಷ್ಠ 2,0000ಅ ಉಷ್ಣತೆಯ ಒಳಗೆ ಈ ಮೂರೂ ಹಂತಗಳಲ್ಲಿ ಬೇಯಿಸುತ್ತಾರೆ. ತಯಾರಿಸುವ ಪಾತ್ರೆಗಳಿಗನುಣವಾಗಿ ಇದು ವ್ಯತ್ಯಾಸವಾಗುತ್ತದೆ. ಸಾಮಾನ್ಯ ಪಿಂಗಾಣಿ ಪಾತ್ರೆಗಳನ್ನು 6000ಅ ಯಲ್ಲೂ ಕೋಪೆನ್‍ಹೇಗನ್ ಪಿಂಗಾಣಿಯನ್ನು 14800ಅ ಯನಲ್ಲೂ, ಕೈಗಾರಿಕಾ, ವಿದ್ಯುತ್ ಮತ್ತು ವೈಜ್ಞಾನಿಕ ಸ್ಥಾವರಗಳಲ್ಲಿ ಬಳಸುವ ಪಿಂಚಾಣಿ ವಸ್ತುಗಳನ್ನು 20000 ಅ ಯಲ್ಲೂ ಬೇಯಿಸುತ್ತಾರೆ.

	ಆವಿಗೆ : ಆಧುನಿಕ ಪಿಂಗಾಣಿ ಸ್ಥಾವರಗಳಲ್ಲಿ ಎರಡು ರೀತಿಯ ಆವಿಗೆಗಳಿರುತ್ತವೆ. ಒಂದು ಆವರ್ತನೀಯ ಆವಿಗೆ ಇನ್ನೊಂದು ಸುರಂಗ ಅಥವಾ ಅವಿಚ್ಛಿನ್ನ ಆವಿಗೆ.

	ತಣ್ಣಗಿನ ಆವಿಗೆಯಲ್ಲಿ ಪಿಂಗಾಣಿ ಪಾತ್ರೆಗಳನ್ನು ಜೋಡಿಸಿಟ್ಟು, ಉರಿಹಾಕಿ, ಕ್ರಮ ಕ್ರಮವಾಗಿ ಉಷ್ಣತೆಯನ್ನು ಹೆಚ್ಚಿಸುತ್ತ ಹೋಗಿ ಪಾತ್ರೆಗಳು ಪಕ್ವವಾಗುವ ಉಷ್ಣತೆಯನ್ನು ಉಂಟು ಮಾಡಿ, ಹದವಾಗಿ ಬೆಂದ ಮೇಲೆ ಉರಿ ತಗ್ಗಿಸಿ, ಪಾತ್ರೆಗಳನ್ನು ಆರ ಬಿಡುತ್ತಾರೆ. ಆನಂತರ ಅವುಗಳಿಗೆ ಮೆರಗು ಕೊಡುತ್ತಾರೆ. ನಿರಂತರವಾಗಿ ಪಿಂಗಾಣಿ ತಯಾರು ಮಾಡದೇ ಇರುವ ಕಾರ್ಖಾನೆಗಳಿಗೆ ಈ ಆವರ್ತನೀಯ ಆವಿಗೆ ವಿಧಾನ ಉತ್ತಮ.

	ಸುರಂಗ ಆವಿಗೆಗಳನ್ನು ನೇರವಾಗಿ ಅಥವಾ ವೃತ್ತ್ತಾಕಾರವಾಗಿ ನಿರ್ಮಿಸುತ್ತಾರೆ. ಒಳ ಮೈಯನ್ನು ಉಷ್ಣಾವಾಹಕ ಇಟ್ಟಿಗೆಗಳಿಂದ ಕಟ್ಟುತ್ತಾರೆ. ಸುರಂಗದ ವಿವಿಧ ವಲಯಗಳಲ್ಲಿ ಸಂಚರಿಸಲನುಕೂಲವಾಗುವಂತೆ ಯಂತ್ರ ನಿಯಂತ್ರಿತ ಸುರಂಗವಾಹಕ ಅಥವಾ ಚಲಿಸುವ ತಟ್ಟೆಗಳನ್ನು ಅಣಿಗೊಳಿಸುತ್ತಾರೆ. ಈ ಸುರಂಗವಾಹಕಗಳ ಮೇಲೆ ಹಸಿ ಪಿಂಗಾಣಿ ಪಾತ್ರೆಗಳನ್ನು ಕ್ರಮವಾಗಿ ಜೋಡಿಸಿಟ್ಟು ಸಂಚಲನೆಗೊಳಿಸುತ್ತಾರೆ. ಸುರಂಗ ಆವಿಗೆಯ ವಿವಿಧ ವಲಯಗಳಲ್ಲಿ ಬೇರೆ ಬೇರೆ ಮಟ್ಟದ ಉಷ್ಣತೆ ಇರುತ್ತದೆ.

	ಸುರಂಗ ಆವಿಗೆಗಳ ಪಾತ್ರ ಮತ್ತು ವ್ಯಾಪ್ತಿ ಒಮ್ಮೆಗೆ ಎಷ್ಟು ಪಾತ್ರೆಗಳ ಬೇಯಬೇಕಾಗಿರುತ್ತದೋ ಅಷ್ಟು ದೊಡ್ಡದಾಗಿರುತ್ತವೆ. ಸುರಂಗ ವಾಹಕಗಳನ್ನು ಜೋಡಿಸಿರುವ ಸುರಂಗ ಆವಿಗೆಗಳ ಪ್ರವೇಶದ್ವಾರ 4'-5' ಅಗಲವಾಗಿಯೂ 6'-8' ಎತ್ತರವಾಗಿಯೂ ಇರುತ್ತವೆ. ಇವುಗಳ ಸಾಮಾನ್ಯ ಉದ್ದ 275'.
ಆವಿಗೆಗಳ ಇಂಧನವಾಗಿ ಕಲ್ಲಿದ್ದಲು ಅಥವಾ ಸೌದೆಯನ್ನು ಬಳಸುತ್ತಿದ್ದಾರಾದರೂ ಎಣ್ಣೆ ಅಥವಾ ಎಣ್ಣೆ ಅನಿಲಗಳ ಬಳಕೆಯೇ ಹೆಚ್ಚು. ಕಲಾತ್ಮಕ ಅಲಂಕರಣ ಪಿಂಗಾಣಿ ತಯಾರಿಕೆಯಲ್ಲಿ ವಿದ್ಯುತ್ ಒಲೆಗಳೇ ಹೆಚ್ಚು ಬಳಕೆಯಲ್ಲಿವೆ.

	ಮೆರಗು ಕೊಡುವಿಕೆ : ಚೀನೀ ಪಿಂಗಾಣಿ ಪಾತ್ರೆಗಳಿಗೆ ಗಾಜಿನಂಥ ಹೊಳಪು ಕೊಡುವುದನ್ನು ಮೆರಗು ಕೊಡುವಿಕೆ ಎನ್ನುತ್ತಾರೆ. ಮೆರುಗು ಗಾಜಿನ ಲಕ್ಷಣಗಳನ್ನೇ ಹೊಂದಿರುತ್ತದೆ. ಹೊಳಪುಳ್ಳ ಬಣ್ಣವಿರುವ ಅಥವಾ ಇಲ್ಲದಿರುವ, ಪಾರದರ್ಶಕ ಹಾಗೂ ಅಪಾರದರ್ಶಕ ಅಥವಾ ಹಾಲುಬಿಳಿ ಮೆರುಗುಗಳನ್ನು ಕೊಡಬಹುದು.

	ಪಿಂಗಾಣಿ ಮೆರಗನ್ನು ಗಾಜಿನ ಮೂಲಧಾತುವಾದ ಸಿಲಿಕಾದಿಂದಲೇ ತಯಾರಿಸುತ್ತಾರೆ. ಸಿಲಿಕಾವನ್ನು ಸೋಡಾ ಸೀಸ, ಸಣ್ಣ ಅಥವಾ ಬೋರ್ಯಾಕ್ಸ್ ಅಥವಾ ಇವುಗಳ ಸಂಮಿಶ್ರಣದೊಂದಿಗೆ ಬೆರೆಸುತ್ತಾರೆ. ಸಿಲಿಕಾವನ್ನು ಕಾಯಿಸಿದರೆ ಗಾಜಾಗುತ್ತದೆ. ಇದನ್ನೆ ಮೆರುಗಾಗಿ ಉಪಯೋಗಿಸುವುದಿಲ್ಲ. ಸೋಡಾ ಅಥವಾ ಇತರ ಲೋಹ ಆಕ್ಸೈಡುಗಳು ಸಿಲಿಕಾದೊಂದಿಗೆ ಸೇರಿ ಅಭಿವಾಹಕಗಳಾಗಿ ಕೆಲಸ ಮಾಡಿ, ತಾವು ಕರಗುವ ಕಡಿಮೆ ಉಷ್ಣತೆಯಲ್ಲೇ ಸಿಲಿಕಾವನ್ನು ಕರಗುವಂತೆ ಮಾಡಿ ಮೆರುಗು ದ್ರವ್ಯವಾಗುತ್ತದೆ. ಈ ದ್ರವ್ಯವನ್ನು ಮೆರಗು ಲೇಪವಾಗಿ ಬಳಸಬಹುದು. ಇವುಗಳ ಜೊತೆಗೆ ಅಗತ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಅಲ್ಯುಮಿನಿಯಮ್ಮನ್ನೂ ಈ ಮೆರಗು ದ್ರವ್ಯದೊಂದಿಗೆ ಬೆರೆಸಬೇಕು. ಅಲ್ಯೂಮಿನಿಯಮ್ ಸೇರುವುದರಿಂದ ಪಿಂಗಾಣಿಯ ಹೊರಮೈ ದ್ರವಬಿಂದುವೂ ಜಾರಿ ಬೀಳುವಷ್ಟೂ ನುಣುಪಾಗುತ್ತದೆ.

	ಇವಷ್ಟೇ ಅಲ್ಲದೆ ಮೆರುಗು ದ್ರವ್ಯಕ್ಕೆ ಸತು. ಬೇರಿಯಮ್ ಮತ್ತು ಮೆಗ್ನೀಸಿಯಮ್ ಆಕ್ಸೈಡುಗಳನ್ನೂ ಸೇರಿಸುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಫೆಲ್‍ಸ್ಟಾರ್‍ನಲ್ಲಿ (ಮೆರಗು ತಯಾರಿಕೆಯ ಪ್ರಮುಖ ಘಟಕಾಂಶ) ಸೋಡಾ, ಪೋಟ್ಯಾಷ್, ಅಲ್ಯೂಮಿನಿಯಮ್ ಮತ್ತು ಸಿಲಿಕಾಗಳು ಸೇರಿರುತ್ತವೆ.

	ಈ ಮೆರುಗಿಗೆ ಹೆಸರುಗಳನ್ನೂ ಕೊಡುವುದೂ ಉಂಟು. ಮೆರಗು ದ್ರವ್ಯಕ್ಕೆ ಸೇರಿರುವ ಪ್ರಧಾನ ಘಟಕಾಂಶಗಳ ಹೆಸರೇ ಆ ಮೆರುಗಿಗೆ ಬಂದಿರುತ್ತದೆ. ಸೋಡಾ ಸೇರಿದಾಗ ಸೋಡಾ ಮೆರಗೆಂದೂ ಲೆಡ್ ಆಕ್ಸೈಡ್ ಸೇರಿದಾಗ ಸೀಸದ ಮೆರುಗೆಂದೂ ಕರೆಯುತ್ತಾರೆ.

	ಚೀನೀ ಪಿಂಗಾಣಿಗಳಿಗೆ ಲೆಡ್ ಆಕ್ಸೈಡ್, ಬೊರಾನ್ ಆಕ್ಸೈಡ್, ಸಿಲಿಕಾ ಮತ್ತು ಅಲ್ಯೂಮಿನಿಯಂಗಳಿಂದ ಮಿಶ್ರಣಗೊಂಡ ಮೆರುಗನ್ನೇ ಬಹುಮಟ್ಟಿಗೆ ಕೊಡುತ್ತಾರೆ.

	ಪಿಂಗಾಣಿ ಮೆರುಗಿನ ಘಟಕಾಂಶಗಳನ್ನೆಲ್ಲ ಸೇರಿಸಿ ಕುಟ್ಟಿ ಪುಡಿ ಮಾಡುತ್ತಾರೆ. ಆನಂತರ ಇದನ್ನು ನೀರಿನೊಂದಿಗೆ ಸೇರಿಸಿ ಚಕಮಕಿ ಕಲ್ಲುಗಳನ್ನು ಹೊಂದಿಸಿರುವ ಬಾಲ್‍ಮಿಲ್ಲುಗಳಿಗೆ ಹಾಕಿ ಅರೆಯುತ್ತಾರೆ. 

	ಮೆರುಗನ್ನು ಅರೆಯುವ ಮುಂಚೆಯೂ ಲೇಪನ ಮಾಡುವ ಮುಂಚೆಯೂ ನೀರಿನೊಂದಿಗೆ ಬೆರೆಸಬೇಕಾಗುತ್ತದೆ. ಮೆರುಗಿಗೆ ಸೇರುವ ಘಟಕಾಂಶಗಳು ನೀರಿನಲ್ಲಿ ಕರಗದಂಥವುಗಳಾಗಿರಬೇಕು. ಕರಗುವಾಗ ವಿಷಾನಿಲ ಉತ್ಪತ್ತಿ ಮಾಡದಂಥವುಗಳಾಗಿರಬೇಕು. ಹೀಗೆ ನೀರಿನಲ್ಲಿ ಕರಗದ ಘಟಕಾಂಶಗಳನ್ನು ಹೊಂದಿದ ಮೆರುಗನ್ನು ಕಚ್ಚಾಮೆರುಗೆಂದು ಕರೆಯುತ್ತಾರೆ. ಇದಕ್ಕೆ ಬೇರೆ ಪೂರಕ ಲೋಹಗಳನ್ನು ಸೇರಿಸಿ, ಸಿದ್ಧಪಡಿಸಿಯಾದ ಮೇಲೆ ಬೇರಾವ ಸಂಸ್ಕರಣವೂ ಇಲ್ಲದೆ ನೇರವಾಗಿ ಪಾತ್ರೆಗಳಿಗೆ ಲೇಪಿಸಬಹುದು.

	ನೀರಿನಲ್ಲಿ ಕರಗುವಂಥ ಘಟಕಾಂಶಗಳನ್ನು ನಿಯಂತ್ರಿತ ವಾತಾವರಣದಲ್ಲಿ ಸಿಲಿಕಾ ಮತ್ತಿತರ ಅಗತ್ಯ ಘಟಕ ಲೋಹಗಳೊಂದಿಗೆ ಕರಗಿಸಿ ಗಾಜು ಮಾಡುತ್ತಾರೆ. ಇದನ್ನು ಫ್ರಿಟ್ ಅಥವಾ ಕಾಚು ಎನ್ನುತ್ತಾರೆ. ಇದನ್ನು ಪುಡಿಯಾಗುವಂತೆ ಅರೆದು ನೀರಿನಲ್ಲಿ ಕಲಿಸಿ ಮೆರಗು ದ್ರವ್ಯವಾಗಿಸಿ, ಲೇಪನ ಮಾಡಬಹುದು. ಇದೇ ಕಾಚು ಮೆರಗು. ಬಹುಪಾಲು ಚೀನೀ ಪಿಂಗಾಣಿಗಳಿಗೆ ಈ ಮೆರಗನ್ನು ಕೊಡುತ್ತಾರೆ. 

	ಮೆರುಗು ಸಿದ್ಧವಾದ ಮೇಲೆ ಅದನ್ನು ಪಿಂಗಾಣಿಗೆ ಲೇಪಿಸುವಲ್ಲಿ ಮೂರು ಪ್ರಧಾನ ಪದ್ಧತಿಗಳಿವೆ. : 1. ಅದ್ದುವಿಕೆ: ಮೆರುಗು ದ್ರವ್ಯದೊಳಗೆ ಪಿಂಗಾಣಿ ಪಾತ್ರೆಯನ್ನು ಅನಾಮತ್ತಾಗಿ ಅದ್ದುವುದು. 2. ಚಿಮುಕಿಸುವಿಕೆ : ತಿರುಗು ಮೇಜಿನ ಮೇಲೆ ಪಿಂಗಾಣಿ ಪಾತ್ರೆಯನ್ನು ಇಟ್ಟು ಎರಚು ಬಂದೂಕದಿಂದ (ಸ್ಪ್ರೇಗನ್) ದ್ರವರೂಪಿ ಮೆರುಗನ್ನು ಸಮಾನವಾಗಿ ಚಿಮುಕಿಸುತ್ತಾರೆ. ಬಂದೂಕದಿಂದ ಮೆರಗನ್ನು ಬಯಸಿದಷ್ಟು ಮಂದವಾಗಿ ಅಥವಾ ತೆಳುವಾಗಿ ಕೊಡಲು ಅನುಕೂಲವಾಗುವದರಿಂದ ಈ ವಿಧಾನವೇ ಹೆಚ್ಚು ಬಳಕೆಯಲ್ಲಿದೆ. ಒಂದಕ್ಕಿಂತ ಹೆಚ್ಚು ಬಣ್ಣ ನೀಡುವಾಗಲೂ ಕೊರೆದ ಅಚ್ಚು ಕಾಗದವನ್ನು ಅಂಟಿಸಿದ ಪಿಂಗಾಣಿಗಳಿಗೂ ಈ ಬಂದೂಕದಿಂದಲೇ ಬಣ್ಣವನ್ನು ಚಿಮುಕಿಸುತ್ತಾರೆ. 3. ಬಣ್ಣ ಹಾಕುವಿಕೆ : ಕೈಗಳಿಂದಲೇ ಬಣ್ಣ ಹಾಕಬೇಕಾಗುತ್ತದೆ. ಬಂದೂಕಗಳಲ್ಲಿ ಚಿಮುಕಿಸಿದಾಗಲೂ ಬಣ್ಣ ಬೀಳದಂತ ಭಾಗಗಳಿಗೆ ಕುಂಚವನ್ನು ಉಪಯೋಗಿಸಿಕೊಂಡು ಕೈಗಳಿಂದಲೇ ಬಣ್ಣ ಲೇಪನ ಮಾಡುತ್ತಾರೆ. ಕಲಾತ್ಮಕವಾದ ಒಡಲು, ಕಂಠ, ತಳ ರಚನೆ ಮಾಡುವಲ್ಲಿ ಇದು ಉತ್ತಮ ವಿಧಾನ.

	ಮೆರುಗು ಲೇಪನ ಮಾಡಿ ಅವರ್ತನೀಯ ಅಥವಾ ಸುರಂಗ ಅವಿಗೆಗಳಲ್ಲಿ ಪಿಂಗಾಣಿಗಳನ್ನು ಕ್ರಮವಾಗಿ ಜೋಡಿಸಿ ಇಡುತ್ತಾರೆ. ಪಿಂಗಾಣಿಯನ್ನು ಕಾಯಿಸಿದಾಗ ಹೊರಮೈಗೆ ಲೇಪಿಸಿದಾಗ ಮೆರುಗು ದ್ರವ್ಯ ಕರಗಿ, ಗಾಜಿನಂಥ ಹೊಳಪುಬಂದು ಪಿಂಗಾಣಿಯ ಹೊರಮೈಗೆ ಅಭೇದ್ಯವಾದ ಕವಚವಾಗಿ ಬೆಸದುಕೊಳ್ಳುತ್ತದೆ. ಅವಿಗೆಗಳಿಗೆ ಜೋಡಿಸುವಾಗ ಪಿಂಗಾಣಿಗಳು ಒಂದಕ್ಕೊಂದು ತಗುಲಿ, ಕರಗಿದ ಮೆರುಗ ಪರಸ್ಪರ ಅಂಟಿಕೊಳ್ಳದಂತೆ ಎಚ್ಚರವಹಿಸಬೆಕು. ಕಾವು ಜೇಡಿನಿಂದ ಮಾಡಿರುವ ಮಟ್ಟುಗೋಲು, ಪಿನ್ನುಗಳು, ಚೋದಕಗಳು, ಸುತ್ತುಕಟ್ಟು, ಪೀಠ ಮುಂತಾದ ಅವಿಗೆ ಸಲಕರಣೆಗಳನ್ನು ಉಪಯೋಗಿಸಿಕೊಂಡು ಪಿಂಗಾಣಿಗಳನ್ನು ಅವಿಗೆಯಲ್ಲಿ ಜೋಡಿಸುತ್ತಾರೆ.

	ಮೆರಗು ಕೊಟ್ಟ ಪಿಂಗಾಣಿಗೆ ಅಲಂಕರಣವನ್ನು ಮೆರುಗಿನ ಹೊರಗೆ ಅಥವಾ ಮೆರುಗು ಕವಚದೊಳಗೆ ಮಾಡುತ್ತಾರೆ. 

	ಒಳಭಾಗದಲ್ಲಿ ಮಾಡಿದ ಅಲಂಕರಣ ಹೆಚ್ಚು ಬಾಳಿಕೆ ಬರುತ್ತದೆ. ಬಣ್ಣದ ಅಲಂಕರಣವೆಲ್ಲ ಮೆರುಗು ಕವಚದಿಂದ ರಕ್ಷಿತವಾಗಿರುವುದರಿಂದ ಮಂಕಾಗುವುದಿಲ್ಲ. ಮೆರಗು ಕೊಡಲು ಕೊಡುವ ಉಷ್ಣತೆಯ ಉನ್ನತ ಮಟ್ಟದಲ್ಲೇ ಅಲಂಕರಣವನ್ನೂ ಬೆಸೆಯಬೇಕಾಗಿರುವುದರಿಂದ ಹೆಚ್ಚು ಬಣ್ಣಗಳನ್ನು ಬಳಸಲಾಗುವುದಿಲ್ಲ. ಕೆಲವು ಬಣ್ಣಗಳು ಅಧಿಕ ಉಷ್ಣತೆಯಲ್ಲಿ ಕರಗಿ ಕಾಣೆಯಾಗುತ್ತವೆ. ಒಳ ಅಲಂಕರಣಕ್ಕೆ ಸಾಮಾನ್ಯವಾಗಿ ಕಬ್ಬಿಣ, ಕೋಬಾಲ್ಟ್ ಅಥವಾ ತಾಮ್ರದ ಆಕ್ಸೈಡ್‍ಗಳನ್ನು ಬೆಸುಗೆ ದ್ರವ್ಯ ಮತ್ತು ಉಷ್ಣವಾಹಕ ಫ್ಲಿಂಟ್ ಶಿಲೆಗಳೊಂದಿಗೆ ಸೇರಿಸಿ ಬಣ್ಣ ಮೂಡಿಸುತ್ತಾರೆ. ಹೀಗೆ ಮಾಡುವುದರಿಂದ ಒಳಗೆ ಮೂಡಿ ಬರುವ ಬಣ್ಣಗಳು ಕರಗಿ ಹರಿಯುವುದೂ ಇಲ್ಲ. ಮಬ್ಬುಗೊಳ್ಳುವುದೂ ಇಲ್ಲ. 

	ಮೆರುಗು ಕೊಟ್ಟು ಆರಿದ ಮೇಲೆ ಹೊರಗಿನ ಅಲಂಕರಣ ಮಾಡುತ್ತಾರೆ. ಅಲಂಕರಣಕ್ಕೆ ಏನಾಮೆಲ್ ಅಥವಾ ಗಾಜು ಲೇಪನ ಬಣ್ಣಗಳನ್ನು ಬಳಸುತ್ತಾರೆ. ಗಾಜು ಲೇಪ ಕೂಡ ಒಂದು ರೀತಿಯ ಮೆರುಗೇ. ಇದರಲ್ಲಿ ಮೆರುಗಿನ ಘಟಕಾಂಶಗಳೇ ಇರುತ್ತವೆ. ಇದು ಅಪೇಕ್ಷಿತ ಉಷ್ಣತೆಯಲ್ಲಿ ಅಂದರೆ ಮೆರುಗು ಮೃದುವಾಗುವ ಉಷ್ಣತೆಯಲ್ಲಿ ಕರಗಿ ಮೆರುಗು ಕವಚದಲ್ಲಿ ಸೇರುಕೊಳ್ಳುತ್ತದೆ. ಒಮ್ಮೊಮ್ಮೆ ಮೆರುಗಿನ ಒಳಕ್ಕೂ ಇಳಿಯುವುದುಂಟು. ಈ ಅಲಂಕರಣಕ್ಕೆ ಸಾಮಾನ್ಯವಾಗಿ ಮಬ್ಬಾದ ಹಾಲು ಬಣ್ಣ ಅಥವಾ ಅರೆಮಬ್ಬು ಈ ಬಣ್ಣಗಳನ್ನು ಸ್ವಲ್ಪ ಜೇಡಿ, ಗಾಜು (ಫ್ರಿಟ್), ಟಿನ್ ಆಕ್ಸೈಡ್, ಒಂದು ಅಥವಾ ಹೆಚ್ಚು ಬಣ್ಣಗಳನ್ನು ತರುವ ಕೋಬಾಲ್ಟ್, ಕಬ್ಬಿಣ ತಾಮ್ರ, ಕ್ರೋಮ್, ನಿಕಲ್ ಮತ್ತು ಮ್ಯಾಂಗನೀಸ್ ಆಕ್ಸೈಡುಗಳನ್ನು ಸೇರಿಸಿ, ಅರೆದು, ಪಾತ್ರೆಗಳಿಗೆ ಲೇಪಿಸಿ, ಆವಿಗೆಯಲ್ಲಿ ಬೇಯಿಸಿ ಬೇರೆ ಬೇರೆ ಬಣ್ಣಗಳನ್ನೂ ಮೂಡಿಸುತ್ತಾರೆ.

	ಇಂದು ವ್ಯಾಪಕವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರವಾಗುತ್ತಿರುವ ಅಲಂಕರಣ ಪಿಂಗಾಣಿಗಳನ್ನು ವರ್ಗಾವಣೆ ಅಲಂಕರಣ ಪದ್ಧತಿಯಿಂದಲೇ (ಟ್ರಾನ್ಸ್‍ಫರ್ ಪ್ರಿಂಟಿಂಗ್) ತಯಾರಿಸುತ್ತಾರೆ. ಇದನ್ನು ಡಿಕಲ್‍ಕಮೇನಿಯ ವಿಧಾನವೆಂತಲೂ ಕರೆಯುವುದುಂಟು. ವಿಶೇಷ ರೀತಿಯ ಕಾಗದದ ಮೇಲೆ ಕಲಾತ್ಮಾಕ ನಕ್ಷೆ ಮೂಡಿಸಿ ಅದರ ಮೇಲೆ ಮೆತುಪಾಕವನ್ನು ಲೇಪಿಸಿ ಅದನ್ನು ನಕ್ಷೆಗನುಗುಣವಾಗಿ ಕೊರೆದು, ಚಕ್ರದ ಮೇಲೆ ಎನಾಮಲ್ ಬಣ್ಣಗಳನ್ನು ತುಂಬುತ್ತಾರೆ. ಬೆಂದು, ಮೆರುಗು ಕೊಟ್ಟು ಸಿದ್ಧವಾದ ಪಿಂಗಾಣಿಗಳ ಒಳ ಅಥವಾ ಹೊರ ಮೈಗೆ ವಾರ್ನಿಷ್ ಅಥವಾ ಗಟ್ಟಿ ಅಂಟನ್ನು ಸವರುತ್ತಾರೆ. ಇದರ ಮೇಲೆ ಬಣ್ಣದಿಂದ ತುಂಬಿದ ಡಿಕಲ್ ಕಮೆನಿಯ ಕೊರೆದ ಕಾಗದದ ಬಣ್ಣ ಹಾಕಿರುವ ಭಾಗವನ್ನು ಪಾತ್ರೆಗೆ ಎದುರಾಗಿ ಅಂಟಿಸುತ್ತಾರೆ. ಒರಟು ಉಣ್ಣೆ ಅಥವಾ ಬಿರುಸಾದ ರಬ್ಬರ್ ಚೌಕಗಳಿಂದ ನಕ್ಷೆ ಎತ್ತುವ ಕಾಗದದ ಮೇಲೆ ಒತ್ತಿ ಉಜ್ಜುತ್ತಾರೆ. ಹೀಗೆ ಉಜ್ಜಿದಾಗ ಎತ್ತುವ ಕಾಗದದಲ್ಲಿ ತುಂಬಿದ್ದ ಬಣ್ಣಗಳು ಪಾತ್ರೆಯ ವಾರ್ನಿಷ್ ಮೇಲೆ ಮೂಡುತ್ತವೆ. ಆನಂತರ ನೀರಿನಲ್ಲಿ ಅದ್ದಿ ನಕ್ಷಾ ಕಾಗದವನ್ನು ತೆಗೆಯುತ್ತಾರೆ. ಈ ಪಾತ್ರೆಯನ್ನು ಆವಿಗೆಯಲ್ಲಿ ಇಟ್ಟು 8500 ಆ ಯಷ್ಟು ಉಷ್ಣತೆ ಒದಗಿಸುತ್ತಾರೆ. ಈ ಉಷ್ಣತೆಯಲ್ಲಿ ವಾರ್ನಿಷ್ ಕರಗಿ ಹೋಗಿ ಎನಾಮಲ್ ಬಣ್ಣಗಳು ಮೆರುಗಿನ ಹೊರಕವಚದ ಮೇಲೆ ಬೆಸೆದುಕೊಳ್ಳುತ್ತವೆ. ಈ ಡಿಕಲ್ ಅಥವಾ ವರ್ಗಾವಣೆ ನಕ್ಷಾ ಕಾಗದವನ್ನು ಮೆರಗು ಕವಚದ ಒಳಗಿನ ಅಲಂಕರಣ ಕ್ರಿಯೆಗೆ ಉಪಯೋಗಿಸುವಾಗ ಅದಕ್ಕೆ ಸೂಕ್ತವಾದ ಬಣ್ಣಗಳನ್ನೇ ಬಳಸಬೇಕು. 

	ಸೂಕ್ಷ್ಮ ದರ್ಶಕದಲ್ಲಿ ಪಿಂಗಾಣಿ ಅಲಂಕರಣವನ್ನು ಪರಿಶೀಲಿಸಿದರೆ ಅದು ಕೈಗಳಿಂದ ಮಾಡಿದುದೇ ಅಥವಾ ವರ್ಗಾವಣೆ ಅಲಂಕರಣವಿಧಾನ ರೀತಿ ಮಾಡಿದುದೇ ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಕೈಗಳಿಂದ ಬಣ್ಣ ಹಾಕಿದ್ದುದಾದರೆ ಕುಂಚದ ಗೆರೆಗಳು ಕಂಡುಬರುತ್ತವೆ. ವರ್ಗಾವಣೆ ಅಲಂಕರಣದಲ್ಲಿ ಒಮ್ಮೊಮ್ಮೆ ಅಂಚು ಕಟ್ಟುವಾಗ ಒಂದರ ಮೇಲೊಂದು ಬಿದ್ದಿರುತ್ತದೆ, ಅಥವಾ ನಕ್ಷಾ ಕಾಗದವನ್ನು ಬೇರೆ ಬೇರೆ ಆಕಾರದ ಪಾತ್ರೆಗಳಿಗೆ ಉಪಯೋಗಿಸುವಾಗ ಹೆಚ್ಚಾದರೆ ಮಡಿಸಿರುತ್ತಾರೆ. ಈ ಮಡಿಸಿದ ಗುರುತು ಪಾತ್ರೆಗಳ ಮೇಲೆ ಸೂಕ್ಷ್ಮವಾಗಿ ಬಿದ್ದಿರುತ್ತದೆ.

	ಪಿಂಗಾಣಿ ಪಾತ್ರೆಗಳಿಗೆ ಅಲಂಕರಣವನ್ನು ಕೈಗಳಿಂದ ಮೆರುಗು ಕವಚದ ಮೇಲೂ ಒಳಗೂ ಮಾಡಲು ಸಾಧ್ಯ. ಮೇಲೆ ಹೇಳಿದ ಎನಾಮಲ್ ಬಣ್ಣಗಳನ್ನೇ ಇಲ್ಲೂ ಉಪಯೋಗಿಸಬಹುದು. ಬಣ್ಣಗಳ ಮಿಶ್ರಣವನ್ನು ಕುಟ್ಟಿ, ಪುಡಿ ಮಾಡಿ ಟರ್ಪೆಂಟೈನ್ ಲಿನ್‍ಸೀಡ್ ಹಾಗೂ ಇತರ ಎಣ್ಣೆಗಳೊಂದಿಗೆ ಬೆರೆಸಿ ಕುಂಚದಿಂದ, ಪಾತ್ರೆಗಳ ಮೇಲೆ ಅಲಂಕಾರ ಮಾಡಬೇಕು. ಒಂದೇ ಪಾತ್ರೆಗೆ ವರ್ಗಾವಣೆ ನಕ್ಷಾ ಕಾಗದ ಮುದ್ರೆ ಮುದ್ರಿಸಿಯೂ ಕೈಗಳಿಂದಲೂ ಬಣ್ಣ ರಚನೆ ಮಾಡುವುದು ಉಂಟು. ಮೊದಲು ನಕ್ಷಾ ಕಾಗದದಿಂದ ಚಿತ್ರ ಬಿಡಿಸಿ, ಎಲೆ, ಹೂ, ಬಟ್ಟೆ ಅಥವಾ ನೀರು ಇವುಗಳನ್ನು ಕೈಗಳಿಂದ ಬಣ್ಣ ತುಂಬಿ ಅಲಂಕರಣ ಮಾಡುತ್ತಾರೆ. 

	ಸ್ವರ್ಣ ಲೇಪ: ಎನಾಮೆಲ್ ಬಣ್ಣಗಳಿಂದ ಕಡಿಮೆ ಉಷ್ಣತೆಯಲ್ಲಿ ಸ್ವರ್ಣ ಲೇಪನ ಮಾಡುತ್ತಾರೆ. ಉಪಯೋಗಿಸುವ ಚಿನ್ನದ ಪ್ರಮಾಣದಲ್ಲಿ ಮೇಲೆ ಸ್ವರ್ಣ ಲೇಪನದ ಹೊಳಪು ವ್ಯತ್ಯಾಸವಾಗುತ್ತದೆ. ಶುದ್ಧ ಚಿನ್ನವನ್ನು ಹೆಚ್ಚು ಪ್ರಮಾಣದಲ್ಲಿ ಬೆರೆಸಿ, ಬೇಯಿಸಿ ಆದ ಮೇಲೆ ಉಜ್ಜಿ ಮೆರುಗು ಕೊಡುತ್ತಾರೆ. ಚಿನ್ನವನ್ನು ಗೌಣವಾಗಿ ಬೆರೆಸಿ ಅಲಂಕರಣ ಮಾಡಿದ ಪಾತ್ರೆಗಳಲ್ಲಿ ಚಿನ್ನದ ಜಾಜ್ವಲ್ಯ ಹೊಳಪು ಹೆಚ್ಚಿರುತ್ತದೆಯೇ ಹೊರತು ಚಿನ್ನಾಂಶವಲ್ಲ. ಸ್ವರ್ಣಲೇಪ ತುಂಬಾ ಕಡಿಮೆ ಉಷ್ಣತೆಯಲ್ಲಿ ಕರುಗುವುದರಿಂದ ಸ್ವರ್ಣಲೇಪನದ ಹೊಳಪು ಎನಾಮೆಲ್ ಬಣ್ಣಗಳಂತೆ ಹೆಚ್ಚು ಕಾಲ ಬಾಳದೆ ಬಹುಭಾಗ ಮಂಕಾಗಿ ಹೋಗುತ್ತವೆ. 

	ಕಾರ್ಖಾನೆ ಗುರುತು : ಪಿಂಗಾಣಿ ಪಾತ್ರೆಗಳ ತಳಭಾಗದಲ್ಲಿ ತಯಾರಾದ ಕಾರ್ಖಾನೆಯ ಹೆಸರು, ದೇಶಗಳನ್ನು ಸೂಚಿಸುವ, ಕೂಡಕ್ಷರ (ಮಾನೋಗ್ರಾಮ್), ಮುದ್ರೆ ಅಥವಾ ವ್ಯಾಪಾರಿ ಚಿಹ್ನೆಗಳನ್ನು ಅಚ್ಚು ಮಾಡುತ್ತಾರೆ. ಇವನ್ನು ಮೆರುಗಿನ ಮೇಲೂ ಒಳಗೂ ಹಾಕಬಹುದು: ಕೈಗಳಿಂದ ರಚಿಸಲೂ ಬಹುದು.; ಅಚ್ಚು ಮಾಡಲೂ ಬಹುದು; ಕೆಲವು ಕಾರ್ಖಾನೆಗಳಲ್ಲಿ ಹಸಿ ಪಿಂಗಾಣಿಗೇ ಈ ಮುದ್ರೆ ಅಚ್ಚು ಮಾಡಿರುತ್ತಾರೆ. ಚಿನ್ನ, ಬೆಳ್ಳಿಗಳಿಗೆ ಅವುಗಳ ಗುಣಮಟ್ಟವನ್ನು ತಿಳಿಸುವ ಮುದ್ರೆಯಿರುವಂತೆ, ಪಿಂಗಾಣಿಗಳಿಗೂ ಈ ಮುದ್ರೆ ಮುಖ್ಯ. ಕೆಲವು ಪಿಂಗಾಣಿಗಳಲ್ಲಿ ಬಿಡಿಬಿಡಿ ಅಕ್ಷರಗಳೂ ಸಂಖ್ಯೆಗಳೂ ಇರುತ್ತವೆ. ಇವು ಕೆಲಸಗಾರನ ಸಂಜ್ಞೆಯನ್ನೂ ತಯಾರಿಸಿದ ದಿನವನ್ನೂ ವಿಭಾಗವನ್ನೂ ಸೂಚಿಸುತ್ತವೆ. ಕಾರ್ಯಗಾರದ ಮೇಲ್ವಿಚಾರಕರು ಮಾತ್ರ ಇವುಗಳಿಗೆ ವಿವರಣೆ ನೀಡಬಲ್ಲರು. 

	ಪಿಂಗಾಣಿಗಳನ್ನು ಭಾರತವೂ ಸೇರಿದಂತೆ ಪ್ರಪಂಚದ ಹಲವಾರು ರಾಷ್ಟ್ರಗಳು ತಯಾರಿಸುತ್ತವೆ. ಸಿಲಿಕೇಟ್ ಉದ್ಯಮದ ಒಂದು ಅಂಗವಾದ ಇದರಲ್ಲಿ ತಯಾರಾಗುವ ವಸ್ತುಗಳನ್ನೂ ದಿನಬಳಕೆಗೂ ವಿದ್ಯುದ್ರೋಧಕ್ಕೂ ಬಳಸುವುದಿದೆ.
(ಜೆ.ಎಸ್.ಪಿ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ